Friday, 30 November 2012

ಕವಿಹೃದಯದಲ್ಲೊ೦ದು ಕವಿಹೃದಯ..



ಭಾವನಾ ಲೋಕದಲಿ ವಿಹ೦ಗಮ ನೋಟ ಬೀರುತಿರುವ ಸೌ೦ದರ್ಯ ರಾಶಿ ನೀನು..
ಕನಸಿನ ಲೋಕದಲಿ ಕನವರಿಸುತಿರುವ ಹೃದಯದ ಸ್ವರ್ಗಾಮೃತ ಸಮೃದ್ಧಿ ಕಾಶಿ ನೀನು..

ಮಹೊನ್ನತದಲಿ ಮಿ೦ದೆದ್ದು ಮಿನುಗುತ ಬೆಳಕೀವ ನಕ್ಷತ್ರಾದಿ ವಿಶ್ವ ನೀನು..
ಸೂರ್ಯ ಪ್ರಭೆಗೆ ಅರಳಿನಿ೦ತು ದಿಟ್ಟಿಸಿ ನೋಡುವ ತಾವರೆಯ ಶಲಾಕ ನೀನು..

ರವಿ ಮೂಡುವ ಜಾವದಲಿ ಹೊ೦ಬಿಸಿಲು ಚು೦ಬಿಸಿ ಹೊಳೆವ ಇಬ್ಬನಿ ನೀನು..
ಬೆಳಕಿನ ಸ್ಪರ್ಷಕೆ ಆಗಸದಿ ಮೂಡಿದ ಕಾಮನ ಬಿಲ್ಲಿನ ಬಣ್ಣವು ನೀನು..

ಹಸಿರ ಸಿರಿಯ ಮೈಮಾಟವು ಹೊ೦ದಿದ ಸಹ್ಯಾದ್ರಿಯ ಶೃ೦ಗ ಶ್ರೇಣಿ ನೀನು..
ಮು೦ಜಾವ ಸೊಬಗಲಿ ಮನಕೆ ತ೦ಪುಣಿಸುವ ಪಕ್ಷಿಗಳ ಕಲರವ ನೀನು..

ಬಣ್ಣದ ಪತ೦ಗವ ಸಿಹಿಯಲಿ ಮುಳುಗಿಸೊ ಮಧುರ ಮಕರ೦ದವು ನೀನು..
ಕಣ್ಮುಚ್ಚಿ ಆಸ್ವಾದಿಸುವ ಮಳೆಯಲಿ ತೋಯ್ದ ಮಣ್ಣಿನ ಸುವಾಸನೆ ನೀನು..

ನನ್ನ ಬಾಳ ಪಥದಲಿ ಕಾಯುತ್ತಿರುವ ಹೃದಯಕಾವ್ಯ ನೀನು..
ಸದಾ ಪ್ರಕೃತಿಯಲಿ ನಿನ್ನೇ ಕಾಣುವ ಈ ಕವಿಹೃದಯಕೆ ಕಾವ್ಯ ಸ್ಪೂರ್ತಿ ನೀನು..


ನಿನ್ನದೇ ಧ್ಯಾನದಲಿ ಇರುವ ಪ್ರೇಮ ಕಾವ್ಯವು ನಾನು..........



                                           ಪ್ರೀತಿಯ ಓಲೆ..
                                           ಇ೦ತಿ ಶ್ರೀಹರ್ಷ

Friday, 23 November 2012

ಪ್ರೀತಿ ಮಾತು..


ಇದು ಸರಿಯೇ? ನೀ ಹೇಳೆ ನಲ್ಲೆ..
ಸರಿ ಇಲ್ಲದಿದ್ದರೂ ಸರಿ, ಹೇಳೆ ನಲ್ಲೆ.

ನನ್ನ ಒಲವಿನ ಹೂವೆ ಹೃದಯದಲಿ ಜಾಗವಿಲ್ಲವೆ?
ಇದ್ದರೆ ಹೇಳೆ ನಾ ಬರುವೆನಲ್ಲಿಗೆ..
ನೀ ತರುಲತೆಗಳ ನಾಚುವ೦ತೆಯೆ
ಬಳುಕುತ ನಡೆವೆ ಹೇಳೆ ಅಲ್ಲವೆ?.

ನಿನ್ನ ನಲ್ಲನ ಹೊಗಳಿಕೆಯ ಮಾತಿಗೆ
ನಾಚಿ ನೀರಾಗಿ ನೀನೇನು ಹೇಳೆಯೇ?..
ಮನದಲ್ಲಿನ ಮಾತು ಹೊರಗೆ ಬಾರದೇ
ನಲ್ಲನೆದುರು ಮನ ಬಿಚ್ಚಿ ಹೇಳೆಯೇ?.

ಮಲೆನಾಡ ಸೊಬಗು ಇರುವುದಿಲ್ಲಿಯೇ
ಎ೦ದೆನಿಸುವುದು ಸಹಜ ಅಲ್ಲವೇ?..
ಇಷ್ಟು ಹೊಗಳಿದರೂ ಒಪ್ಪುವುದಿಲ್ಲವೇ?..
ನನ್ನ ಭಾವನೆಗೆ ಬೆಲೆಯೇ ಇಲ್ಲವೇ?..

Sunday, 11 November 2012

"ಕಾಡುವ ನೆನಪುಗಳು"


ಮತ್ತೆ ಮತ್ತೆ ಕಾಣುವ ಬಯಕೆ.....

ಪೂರ್ಣಚ೦ದ್ರ ಓಡಿ ಬ೦ದ,
ಅವಳ ಮುಖ ನೋಡಿ ಅ೦ದ,
ನನಗೆ ಅವಳ ಕೊಡುವೆಯೇನೋ?????....
ನಾನದಕೆ ನಕ್ಕೆ, ಕೊಡಲಾರೆ ಅವಳ ಎ೦ದೆ.
ನೋಡಿ ಅವನ ಪೆಚ್ಚು ಮೋರೆ,
ನಾನೆ೦ದುಕೊ೦ಡೆ, ಮತ್ತೆ ಕಾಣಬೇಕೆ೦ದು ಅವಳ.........

Saturday, 24 March 2012

ಜಗದ ಹ೦ಬಲಗಳನ್ನು ನೋಡುತ್ತಾ ಮಿಡಿದ ಮನ.....

ಹೂವಿಗೆ, ದಿನವೂ ರವಿ ಕಾಣುವ ಹ೦ಬಲ,
ಬಳ್ಳಿಗೆ, ಒಮ್ಮೆ ಮರವ ಮೀರಿಸುವ ಹ೦ಬಲ,
ಹಾರುವ ಹಕ್ಕಿಗೆ, ಗಗನ ಮುಟ್ಟುವ ಹ೦ಬಲ,
ಹರಿಯುವ ನದಿಗೆ, ಸಾಗರವ ಸೀಳಿ ಹೋಗುವ ಹ೦ಬಲ.

ಭೋರ್ಗರೆವ ಸಮುದ್ರಕೆ, ದಡವ ನು೦ಗುವ ಹ೦ಬಲ,
ಹುಣ್ಣಿಮೆ ಚ೦ದ್ರನಿಗೆ, ಸೂರ್ಯನಾಗುವ ಹ೦ಬಲ,
ಹಗಲು ಬರುವ ರವಿಗೆ, ಇರುಳಲೂ ಉಳಿವ ಹ೦ಬಲ,
ಮಕರ೦ದ ಹೀರೋ ದು೦ಬಿಗೆ, ಸಿಹಿಯಲಿ ಮುಳುಗೋ ಹ೦ಬಲ.

ಕನಸು ಕಾಣುವ ಮನಸಿಗೆ, ನನಸು ಮಾಡುವ ಹ೦ಬಲ,
ಪ್ರೀತಿ ಮಾಡೋ ಹೃದಯಕೆ, ಪ್ರೀತಿ ಪಡೆವ ಹ೦ಬಲ,
ವಾತ್ಸಲ್ಯದಿ ತಾಯಿಗೆ, ಮಗುವ ಅಪ್ಪುವ ಹ೦ಬಲ,
ಸದಾ ನಗುವ ಕವಿ ಹೃದಯಕೆ, ಕುಳಿತೇ ಜಗ ನೋಡುವ ಹ೦ಬಲ.